ನೊಬೆಲ್ ಪ್ರಶಸ್ತಿ ಪಡೆದ 4 ಭಾರತೀಯರು/ಸಂಜಾತರು/ಭಾರತೀಯ ಮೂಲ

ಸರ್. ಸಿ. ವಿ. ರಾಮನ್ - ಭೌತಶಾಸ್ತ್ರ (1930)

ಭಾರತದ ಶ್ರೇಷ್ಠ ಭೌತಶಾಸ್ತ್ರಜ್ಞರಾದ ಸರ್. ಸಿ. ವಿ. ರಾಮನ್ (ಸಿ. ಚಂದ್ರಶೇಖರ್ ವೆಂಕಟ ರಾಮನ್) ಅವರು ಬೆಳಕಿನ ಚದುರುವಿಕೆ (Scattering of Light) ಬಗ್ಗೆ ನಡೆಸಿದ ಸಂಶೋಧನೆಗಾಗಿ ಭೌತಶಾಸ್ತ್ರ ವಿಭಾಗದಲ್ಲಿ 1930ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದನ್ನು ರಾಮನ್ ಪರಿಣಾಮ (Raman Affect) ಎನ್ನುವರು. 1928 ಫೆಬ್ರವರಿ 28 ರಂದು ಸಿ. ವಿ. ರಾಮನ್ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಸಂಶೋಧನೆಯ ಪ್ರಾತ್ಯಕ್ಷಿಕೆ ನಡೆಸಿದರು. ಸಂಶೋಧನೆ ನಡೆಸಿದ ದಿನವಾದ ಫೆಬ್ರವರಿ 28 ಅನ್ನು 1987 ರಿಂದ ಪ್ರತೀ ವರ್ಷ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಅದೇ ರೀತಿ 2022ರ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು 'Integrated Approach in Science and Techonology For Sustainable Future' (ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಮನ್ವಯ ವಿಧಾನ) ಎಂಬ ಧೈಯವಾಕ್ಯದಲ್ಲಿ ಆಚರಿಸಲಾಯಿತು. ಸರ್. ಸಿ. ವಿ. ರಾಮನ್ರವರಿಗೆ ಕೇಂದ್ರ ಸರ್ಕಾರವು 1954ರಲ್ಲಿ 'ಭಾರತ ರತ್ನ ಪ್ರಶಸ್ತಿ' ನೀಡಿ ಗೌರವಿಸಿದೆ. ಈ ಮೂಲಕ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಮೊಟ್ಟ ಮೊದಲ ವಿಜ್ಞಾನಿ ಮತ್ತು ವಿಭಾಗದಲ್ಲಿ ನೊಬೆಲ್ ಪಡೆದ ಏಷ್ಯಾದ ಮೊದಲ ವಿಜ್ಞಾನಿಯಾಗಿದ್ದಾರೆ. ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (IISC) ಯಲ್ಲಿ ನಿರ್ದೇಶಕರಾಗಿ ರಾಮನ್ ಅವರು ಕಾರ್ಯನಿರ್ವಹಿಸಿದ್ದಾರೆ. ರಾಮನ್ ರೀಸರ್ಚ್ ಇನ್ಸಿಟ್ಯೂಟ್ ಅನ್ನು ಬೆಂಗಳೂರಿನಲ್ಲಿ 1948 ರಲ್ಲಿ ಸ್ಥಾಪಿಸಿದರು. ಇತ್ತೀಚೆಗೆ ಈ ಸಂಸ್ಥೆಯು ಅಮೃತ ಮಹೋತ್ಸವವನ್ನು ಆಚರಿಸಿಕೊಂಡಿತು. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 1971 ರಿಂದ ಈ ಸಂಸ್ಥೆಗೆ ಅನುದಾನ ನೀಡಿದೆ. 

ಡಾ|| ಸುಬ್ರಮಣ್ಯನ್ ಚಂದ್ರಶೇಖರ್ - ಭೌತಶಾಸ್ತ್ರ (1983)

ಭಾರತೀಯ ಮೂಲದ ಅಮೆರಿಕಾ ದೇಶದ ಖಭೌತ ವಿಜ್ಞಾನಿ, ಇವರು ಸರ್. ಸಿ. ವಿ. ರಾಮನ್ ಅವರ ಸಂಬಂಧಿಕರಾಗಿದ್ದರು. ಇವರನ್ನು “ನಕ್ಷತ್ರ ಲೋಕದ ಅನಭಿಷಿಕ್ತ ಚಕ್ರವರ್ತಿ" ಎಂದು ಕರೆಯುತ್ತಾರೆ. ನಕ್ಷತ್ರಗಳ ರಚನೆ & ವಿಕಾಸದ ಬಗ್ಗೆ ಇವರು ನಡೆಸಿದ ಸಂಶೋಧನೆಗಾಗಿ 1983ರಲ್ಲಿ ಭೌತಶಾಸ್ತ್ರ ವಿಭಾಗಕ್ಕೆ ಅಮೆರಿಕಾದ ವಿಲ್ಲಿ ಪೌಲರ್ರೊಂದಿಗೆ ಜಂಟಿಯಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಶ್ವೇತ ಕುಬ್ಜ (White Dwarf Star) ಗಳನ್ನು ಕುರಿತ ಹಲವಾರು ಸಂಶೋಧನೆಗಳನ್ನು ನಡೆಸಿದ್ದಾರೆ. ಕಪ್ಪು ಕುಳಿಗಳ (Black Hole) ಬಗ್ಗೆ ಕೂಡ ಸಂಶೋಧನೆ ನಡೆಸಿದ್ದಾರೆ. 2010ರ ಅಕ್ಟೋಬರ್ 19 ರಂದು ವಿಶ್ವದಾದ್ಯಂತ ಇವರ 100ನೇ ವರ್ಷದ ಜನ್ಮ ದಿನಾಚರಣೆಯನ್ನು ಆಚರಿಸಲಾಗಿತ್ತು. 

ವೆಂಕಟರಾಮನ್ ರಾಮಕೃಷ್ಣನ್ - ರಸಾಯನ ಶಾಸ್ತ್ರ (2009)

ವಿ. ರಾಮಕೃಷ್ಣನ್ ಅವರು ತಮಿಳುನಾಡಿನ ಚಿದಂಬರಂನಲ್ಲಿ 1952 ರ ಏಪ್ರಿಲ್ 1 ರಂದು ಜನಿಸಿದ್ದು, ಅಮೆರಿಕಾದ ನಾಗರೀಕತ್ವವನ್ನು ಪಡೆದಿದ್ದಾರೆ. ಇವರು ಬಯೋ ಕೆಮಿಸ್ಟ್ರಿ ಮತ್ತು ಬಯೋ ಫಿಸಿಕ್ಸ್ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ. ರೈಬೋಸೋಮ್ಗಳ ಕಾರ್ಯ & ರಚನೆಗಳ ಬಗ್ಗೆ ನಡೆಸಿದ ಅಧ್ಯಯನಕ್ಕಾಗಿ ಅಮೆರಿಕಾದ ರಸಾಯನಶಾಸ್ತ್ರಜ್ಞ ಥಾಮಸ್ ಎ ಸ್ಟೆಟೆಜ್ & ಇಸ್ರೇಲ್ನ ಅಡಾ ಯೂನಾತ್ ರೊಂದಿಗೆ ಜಂಟಿಯಾಗಿ 2009 ರಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. 2015ರ ಡಿಸೆಂಬರ್ 1 ರಂದು ಲಂಡನ್ನಿನ ರಾಯಲ್ ಸೊಸೈಟಿಯ 62ನೇ ಅಧ್ಯಕ್ಷರಾಗಿ ನೇಮಕಗೊಂಡರು. ಇವರು 5 ವರ್ಷಗಳ ಅಧಿಕಾರವಧಿ ಹೊಂದಿದ್ದರು. 

ಸರ್ ರೋನಾಲ್ಡ್ ರೊಸ್ (Ronald Ross) - ವೈದ್ಯಕೀಯ (1902)

ಭಾರತದ ಉತ್ತರಾಖಂಡ ಅಲ್ಮೋರದಲ್ಲಿ 1857 ಮೇ 13 ರಂದು ಜನಿಸಿದ ಬ್ರಿಟಿಷ್ ವೈದ್ಯರಾಗಿದ್ದಾರೆ. ಇವರಿಗೆ 1902 ರಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ನೊಬೆಲ್ ಪ್ರಶಸ್ತಿ ದೊರಕಿದೆ. ರೊಸ್ರವರು ಭಾರತದ ಪ್ರೆಸಿಡೆನ್ಸಿ ಜನರಲ್ ಕಾಲೇಜಿನಲ್ಲಿ ಅಧ್ಯಯನ ನಡೆಸಿ ಮಲೇರಿಯಾ ರೋಗ ಹರಡಲು 'ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ' ಕಾರಣ ಎಂದು ಪತ್ತೆ ಹಚ್ಚಿದ್ದಕ್ಕಾಗಿ ಈ ನೊಬೆಲ್ ಪ್ರಶಸ್ತಿ ಈ ಮೂಲಕ ಮೊಟ್ಟ ಬ್ರಿಟಿಷ್ ನೊಬೆಲ್ ಪ್ರಶಸ್ತಿ ಪುರಸ್ಕೃತ ಹಾಗೂ ಯೂರೋಪಿನ ಹೊರಗೆ ಜನಿಸಿ ನೊಬೆಲ್ ಪಡೆದ ಮೊಟ್ಟ ಮೊದಲ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಮಲೇರಿಯಾ ರೋಗವು ಪ್ಲಾಸ್ಟೋಡಿಯಂ ಎಂಬ ಆದಿಜೀವಿಯಿಂದ ಬರುತ್ತದೆ. ಮಲೇರಿಯಾ ರೋಗಕ್ಕೆ ಸಿಂಕೋನ ಮರದ ತೆಗೆದ ಅನೇನ್ ಎಂಬ ಔಷಧವನ್ನು ಬಳಸುತ್ತಾರೆ. ಮೊದಲು ಸೊಳ್ಳೆಯ ನಿಯಂತ್ರಣಕ್ಕೆ ಡಿಡಿಟಿ ಸಿಂಪಡಿಸುತ್ತಿದ್ದರು.

ಇವರ ಪ್ರಮುಖ ಕೃತಿಗಳು: Hygiene For Indian Scholars, Researches on Malaria, Observatins on Malaria. 


Post a Comment

0 Comments