ಪೋಲೆಂಡಿನಲ್ಲಿ ಜನಿಸಿದ ಮೇರಿಕ್ಯೂರಿಯವರು ರಷ್ಯಾ ದೇಶದ ಸರ್ಕಾರದ ದೌರ್ಜನ್ಯದಿಂದ ಬೇಸರಗೊಂಡು ಪೋಲೆಂಡ್ ಬಿಟ್ಟು, ಫ್ರಾನ್ಸ್ ದೇಶವನ್ನು ಸೇರಿದರು. ಇವರು ಭೌತಶಾಸ್ತ್ರಜ್ಞೆ, ರಸಾಯನಶಾಸ್ತ್ರಜ್ಞೆ. ತಾರುಣ್ಯದಲ್ಲೇ ಈಕೆ ರಸಾಯನ ಶಾಸ್ತ್ರದಲ್ಲಿ ಪಾಂಡಿತ್ಯ ಗಳಿಸಿ ಗೌರವ ಸಂಪಾದಿಸಿದ್ದರು.
ಪ್ಯಾರಿಸ್ ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಫ್ರೆಂಚ್ ವಿಜ್ಞಾನಿ ಪೆರ್ರಿ ಕ್ಯೂರಿ, ಮೇರಿಗೆ ಪರಿಚಯವಾದರು. ಮುಂದೆ ಅವರಿಬ್ಬರೂ ಸೇರಿ ಅದ್ಭುತ ಸಂಶೋಧನೆ ಮಾಡಿದರು. ಈ ಇಬ್ಬರೂ ಮುಂದೆ ದಂಪತಿಗಳಾದರು. ಕಡು ಬಡತನದ ಜೀವನದಲ್ಲೂ ವಿಜ್ಞಾನ ಸಂಶೋಧನೆಯಲ್ಲಿ ಕಾರ್ಯನಿರತರಾದರು. ಪಿಂಚ್ ಬ್ಲೆಂಡೆಯಿಂದ ಮೇರಿಯು ಒಂದು ವಿಕಿರಣ ಧಾತುವನ್ನು ಕಂಡುಹಿಡಿದರು. ಅದನ್ನು ಸ್ವದೇಶವಾದ ಪೋಲ್ಯಾಂಡಿನ ನೆನಪಿಗೆ “ಪೋಲೋನಿಯಂ” ಎಂದು ಕರೆದಳು. ಮುಂದೆ “ರೇಡಿಯಂ” ಎಂಬ ವಿಕಿರಣವನ್ನು ಸಂಶೋಧಿಸಿದರು. ಈ ಮೂಲವಸ್ತುವಿನ ವಿಸರಣ ಸ್ವಭಾವವು ಅನೇಕ ಹೊಸ ಸಂಶೋಧನೆಗಳಿಗೆ ಕಾರಣವಾಯಿತು.
ಮೇಡಂ ಕ್ಯೂರಿ ಅವರ ಸಾಧನೆಗಳು
ಮೇರಿ ಕ್ಯೂರಿರವರು ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರಗಳೆರಡರಲ್ಲೂ ನೊಬೆಲ್ ಪ್ರಶಸ್ತಿ ಪಡೆದ ಮೊದಲಿಗರು. ಇವರು “ವಿಕಿರಣಶೀಲತೆ” (Radio Activity) ಸಿದ್ಧಾಂತದ ಪ್ರವರ್ತಕರು. ಇವರು ತನ್ನ ಪತಿ ಪರಿಕ್ಯೂರಿ ಹಾಗೂ ಮತ್ತೊಬ್ಬ ಸಂಶೋಧಕ ಹೆನ್ರಿ ಬೆಕ್ವೆರಲ್ರೊಂದಿಗೆ ವಿಕಿರಣಶೀಲತೆ ಪತ್ತೆಹಚ್ಚಿದರು. ಇವರ ಸಾಧನೆಗೆ 1903ರಲ್ಲಿ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ತನ್ನ ಪತಿ ಪೆರಿಕ್ಯೂರಿಯೊಂದಿಗೆ ಹಾಗೂ ಹೆನ್ರಿ ಬೆಕ್ವಿರಲ್ರೊಂದಿಗೆ ಜಂಟಿಯಾಗಿ ಪ್ರಶಸ್ತಿ ಪಡೆದರು.
ಮೇರಿಕ್ಯೂರಿಯವರು “ರೇಡಿಯಂ” ಹಾಗೂ “ಪೊಲಿನಿಯಂ” ಎಂಬ ಧಾತುಗಳನ್ನು ಆವಿಷ್ಕರಿಸಿದ್ದಕ್ಕಾಗಿ 1911ರಲ್ಲಿ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಪಡೆದರು. ಮೇರಿಕ್ಯೂರಿಯವರು ಪ್ಯಾರೀಸ್ ವಿಶ್ವವಿದ್ಯಾಲಯದಲ್ಲಿ ಮೊದಲ ಮಹಿಳಾ ಪ್ರೊಪೆಸರ್ ಆಗಿದ್ದರು. 1910 ರಲ್ಲಿ ಯುನೈಟೆಡ್ ಕಿಂಗ್ಡಂನ ರಾಯಲ್ ಸೊಸೈಟಿ ಆಫ್ ಆರ್ಟ್ಸ್ ನವರು ನೀಡುವ ಆಲ್ಬರ್ಟ್ ಪದಕವನ್ನು ಪಡೆದಿದ್ದರು.
ಅಂತರಾಷ್ಟ್ರೀಯ ರಸಾಯನಶಾಸ್ತ್ರ ವರ್ಷ - 2011: 1911 ರಲ್ಲಿ ಮೇರಿ ಕ್ಯೂರಿ ಅವರು ರಸಾಯನಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದು 2011 ಕ್ಕೆ 100 ವರ್ಷಗಳು ಪೂರೈಸಿದ ಹಿನ್ನಲೆಯಲ್ಲಿ 2011 ನ್ನು ಅಂತರಾಷ್ಟ್ರೀಯ ರಸಾಯನಶಾಸ್ತ್ರ ವರ್ಷವನ್ನಾಗಿ ಆಚರಿಸಲಾಯಿತು.
ದುರಂತದ ಸಾವು: ಮೇರಿಕ್ಯೂರಿರವರು 1934 ಜುಲೈ 4 ರಂದು ತಮ್ಮ 66ನೇ ವಯಸ್ಸಿನಲ್ಲಿ ತಾವೇ ಸಂಶೋಧಿಸಿದ ವಿಕಿರಣ ವಸ್ತುಗಳಿಂದ ಹೊರಸೂಸಿದ ವಿಕಿರಣಗಳಿಂದ ಸಾವನ್ನಪ್ಪಿದರು. ಇವರು ಸುರಕ್ಷತೆ ಕ್ರಮವನ್ನು ಕೈಗೊಳ್ಳದೆ ವಿಕಿರಣ ವಸ್ತುಗಳ ಬಗ್ಗೆ ಸಂಶೋಧನೆ ನಡೆಸಿದರು. ಅದರ ಫಲವಾಗಿ ಸಾವನ್ನಪ್ಪಿದರು. ಆದರೆ ಅವರು ನೀಡಿದ ಕೊಡುಗೆ “ವಿಕಿರಣ ವಸ್ತುಗಳ ಅವಿಷ್ಕಾರ” ಜಗತ್ತಿನ ಅನೇಕ ಸಂಶೋಧನೆಗಳಿಗೆ ದಾರಿ ಮಾಡಿಕೊಟ್ಟಿದೆ.
ಮೇಡಂ ಕ್ಯೂರಿ ಅವರ ಆತ್ಮ ಚರಿತ್ರೆಯನ್ನು ಹಿಂದಿ ಭಾಷೆಗೆ ಭಾಷಾಂತರ: ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಮೇಡಂ ಕ್ಯೂರಿ ಅವರ ಆತ್ಮ ಚರಿತ್ರೆಯನ್ನು ಹಿಂದಿ ಭಾಷೆಗೆ ಭಾಷಾಂತರಿಸಿದ್ದಾರೆ.
0 Comments